ಕರ್ನಾಟಕದ ವಿಶೇಷ ಅಡುಗೆಗಳು

ವಿಕಿಪೀಡಿಯ ಇಂದ
Jump to navigation Jump to search

ಕರ್ನಾಟಕದ ಅಡುಗೆಯಲ್ಲಿ ಸಾಕಷ್ಟು ಪ್ರಾಂತೀಯ ವೈವಿಧ್ಯಗಳಿವೆ. ಪಕ್ಕದ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಇವುಗಳ ಪ್ರಭಾವ ಕರ್ನಾಟಕದ ಅಡುಗೆಗಳ ಮೇಲೆ ಆಗಿದೆ. 1980ರ ದಶಕದ ನಂತರ ಉತ್ತರ ಭಾರತದ ಅಡುಗೆಗಳೂ ಕರ್ನಾಟಕದಲ್ಲಿ ಜನಪ್ರಿಯವಾದವು. ಇಲ್ಲಿನ ತಿನಿಸು ಪಕ್ಕದ ಮೂರು ದಕ್ಷಿಣ ಭಾರತದ ರಾಜ್ಯಗಳ ಮತ್ತು ರಾಜ್ಯದ ಉತ್ತರಕ್ಕೆ ಇರುವ ಮಹಾರಾಷ್ಟ್ರ ರಾಜ್ಯದ ಅನೇಕ ಪ್ರದೇಶಗಳಲ್ಲಿ ಮತ್ತು ಸಮುದಾಯಗಳ ಆಹಾರ, ಹಾಗೂ ಪ್ರಭಾವವನ್ನು ಪ್ರತಿಫಲಿಸುತ್ತದೆ. ಕೆಲವು ವಿಶಿಷ್ಟ ಭಕ್ಷ್ಯಗಳಾಗಿ ಬಿಸಿ ಬೆಳೆ ಬಾತ್, ಜೋಳದ ರೊಟ್ಟಿ, ಚಪಾತಿ, ರಾಗಿ ರೊಟ್ಟಿ , ಅಕ್ಕಿ ರೊಟ್ಟಿ, ಉಪ್ಪಿಟ್ಟು , ಸಾರು, ಇಡ್ಲಿ-ವಡಾ ಸಾಂಬಾರ್, ವಾಂಗಿ ಬಾತ್, ಖರ ಬಾತ್, ಕೇಸರಿ ಬಾತ್, ಬೆಣ್ಣೆ ದೋಸೆ, ರಾಗಿ ಮುದ್ದೆ , ಪಡ್ದು / ಗುಂಡ್ಪೊಂಗ್ಲು, ಕೋಳಿ ಸಾರು, ಮಾಂಸದ ಸಾರು ಇವು (ಮಟನ್ ಕರಿ - ಕನ್ನಡ ಶೈಲಿ) ಸೇರಿವೆ. ಪ್ರಸಿದ್ಧ ಮಸಾಲಾ ದೋಸೆ, ಉಡುಪಿ ಪಾಕಪದ್ಧತಿಯಲ್ಲಿ ಹಾಸು ಹೊಕ್ಕಿದೆ. ಸರಳ ಮತ್ತು ರವೆ ಇಡ್ಲಿ ಮೈಸೂರು ಮಸಾಲೆ ದೋಸೆ ಮತ್ತು ಮದ್ದೂರು ವಡೆ ದಕ್ಷಿಣ ಕರ್ನಾಟಕದಲ್ಲಿ ಜನಪ್ರಿಯವಾಗಿವೆ. ಕರಾವಳಿ ಕರ್ನಾಟಕ ಅನೇಕ ಟೇಸ್ಟಿ ಸಮುದ್ರಾಹಾರ ವಿಶೇಷತೆಗಳನ್ನೂ ಹೊಂದಿದೆ ಸಂದರ್ಭದಲ್ಲಿ ಕೊಡಗು (ಕೊಡಗು) ಜಿಲ್ಲಾ ವಿವಿಧ ಹಂದಿ ಮಸಾಲೆಗಳಿಗೆ ಪ್ರಸಿದ್ಧವಾಗಿದೆ. ಸಿಹಿತಿಂಡಿಗಳಲ್ಲಿ, ಮೈಸೂರು ಪಾಕ್, ಹೋಳಿಗೆ, ಅಥವಾ ಒಬ್ಬಟ್ಟು, ಧಾರವಾಡ ಪೇಢ, ಚಿರೋಟಿ, ಸಜ್ಜಿಗೆ, ಕಡುಬು / ಕರ್ಜಿಕಾಯಿ ಮುಂತಾದವು ಹೆಸರುವಾಸಿಯಾಗಿದೆ.ಕೆಳಗಿನ ಅಡುಗೆಗಳು ಕರ್ನಾಟಕದಲ್ಲಿ ಅನ್ವೇಷಿಸಲ್ಪಟ್ಟು ಆನಂತರ ಭಾರತದ ಹಾಗೂ ಈಚೆಗೆ ವಿಶ್ವದ ಎಲ್ಲಾ ಕಡೆ ಪ್ರಸಿದ್ಧವಾಗಿವೆ.

 • ಮೈಸೂರು ರಸಂ ಅಥವಾ ಸಾರು
 • ಬಿಸಿಬೇಳೆಭಾತ್ ಅಥವಾ ಬಿಸಿಬೇಳೆ ಹುಳಿಯನ್ನ
 • ಚಿತ್ರಾನ್ನದ ಬಗೆಗಳು
 • ಕೋಸಂಬರಿ
 • ಮಸಾಲೆದೋಸೆ
 • ಮಂಗಳೂರು ಬಜ್ಜಿ
 • ಮದ್ದೂರುವಡೆ
 • ಅವರೆಕಾಯಿ ಅಕ್ಕಿರೊಟ್ಟಿ
 • ರಾಗಿರೊಟ್ಟಿ
 • ತೊಗರಿ ನುಚ್ಚಿನುಂಡೆ
 • ಮೈಸೂರುಪಾಕ್
 • ಧಾರವಾಡದ ಫೇಡೆ (ಪೇಡಾ)
 • ಬೆಳಗಾವಿ ಕುಂದಾ
 • ಹಲಸಿನ ಹಪ್ಪಳ

ಉತ್ತರ ಕರ್ನಾಟಕದ ವಿಶೇಷ ಅಡುಗೆಗಳು[ಬದಲಾಯಿಸಿ]

 • ಜೋಳದ ರೊಟ್ಟಿ ಅಥವಾ ಭಕ್ಕರಿ ಇಲ್ಲಿಯ ವಿಶೇಷ. ಜೋಳ ಬೀಸಿದ ಹಿಟ್ಟನ್ನು ಕಲಸಿ ಅದರ ಉಂಡೆಗಳನ್ನು ತೆಳ್ಳಗೆ ತಟ್ಟಿ ಹಂಚಿನ ಮೇಲೆ ಬೇಯಿಸಲಾಗುತ್ತದೆ. ಬೇಯುವಾಗ ಒದ್ದೆಬಟ್ಟೆಯಿಂದ ರೊಟ್ಟಿಯನ್ನು ಅಮುಕುತ್ತಾರೆ. ಜೋಳವನು ತಿಂದವನು ತೋಳದಂತಾಗುವನು ಎಂಬ ಗಾದೆಯೂ ಕನ್ನಡದಲ್ಲಿದೆ.
 • ಎಣ್ಣೆಗಾಯಿ ಅಥವಾ ತುಂಬುಗಾಯಿ ಒಂದು ಬಗೆಯ ಪಲ್ಯದ ಹೆಸರು. ಚಿಕ್ಕ ಬದನೇಕಾಯಿಗಳನ್ನು ಕೊಯ್ದು ಅವುಗಳಲ್ಲಿ ವಿಶೇಷ ಮಸಾಲೆಪುಡಿಯನ್ನು ತುಂಬಿಸಿ ಎಣ್ಣೆಯಲ್ಲಿ ಹುರಿಯುತ್ತಾರೆ. ತುಂಬಿಸಲು ಬೇಕಾದ ಮಸಾಲೆಯನ್ನು ಕಡಲೇಕಾಯಿ (ಶೇಂಗಾ), ಎಳ್ಳು, ಶುಂಠಿ, ಬೆಳ್ಳುಳ್ಳಿ, ಉಪ್ಪು, ಒಣಮೆಣಸಿನಕಾಯಿ ಇತ್ಯಾದಿ ಅನೇಕ ಪದಾರ್ಥಗಳನ್ನು ಬಳಸಿ ತಯಾರಿಸುತ್ತಾರೆ.
 • ಕಾಳುಪಲ್ಯ - ಮೊಳಕೆ ಎಬ್ಬಿಸಿದ ಕಾಳನ್ನು ಬೇಯಿಸಿ ಒಗ್ಗರಣೆ ಹಾಕಿದ ಪಲ್ಯ. ಕಡಲೆಕಾಳು, ಮಡಕೆಕಾಳು ಇತ್ಯಾದಿ ಅನೇಕಬಗೆಯ ಕಾಳುಗಳಿಂದ ತಯಾರಿಸುತ್ತಾರೆ.
 • ರಂಜಕ - ಕೆಂಪು ಮೆಣಸಿನಕಾಯಿಯನ್ನು ಉಪ್ಪು ಮತ್ತು ಇನ್ನೂ ಹಲವು ಮಸಾಲೆಪದಾರ್ಥಗಳೊಂದಿಗೆ ರುಬ್ಬಿ ತಯಾರಿಸಿದ ಚಟ್ನಿ
 • ಎಳ್ಳುಪುಡಿ - ಎಳ್ಳು ಮತ್ತಿತರ ಮಸಾಲೆಪದಾರ್ಥಗಳನ್ನು ಹುರಿದು ಪುಡಿ ಮಾಡಿ ತಯಾರಿಸಿದ ಚಟ್ನಿಪುಡಿ
 • ಗೋಧಿ ಹುಗ್ಗಿ - ಕುಟ್ಟಿದ ಗೋಧಿಯನ್ನು ಹಾಲಿನಲ್ಲಿ ಬೇಯಿಸಿ, ಬೆಲ್ಲ ಮತ್ತು ತುಪ್ಪ ಬೆರೆಸಿ ಮಾಡುವ ವಿಶೇಷ ಸಿಹಿತಿಂಡಿ

ದಕ್ಷಿಣ ಕರ್ನಾಟಕದ ಅಡುಗೆಗಳು[ಬದಲಾಯಿಸಿ]

ಬೆಳಗಿನ ಉಪಾಹಾರ[ಬದಲಾಯಿಸಿ]

 • ದೋಸೆ - ಅನೇಕ ವಿಧದ ದೋಸೆಗಳು ಕರ್ನಾಟಕದಲ್ಲಿ ಪ್ರಸಿದ್ಧ. ಇವುಗಳಲ್ಲಿ "ನೀರುದೋಸೆ" ಎಂಬುದು ಕರ್ನಾಟಕದ ವಿಶೇಷ. ಅಕ್ಕಿ ಮತ್ತು ಕೊಬ್ಬರಿ ಎರಡನ್ನೂ ರುಬ್ಬಿದ ಹಿಟ್ಟಿನಿಂದ ತಯಾರಿಸಿದ ಈ ಖಾದ್ಯವನ್ನು ಕೊಬ್ಬರಿ ಚಟ್ಣಿಯೊಂದಿಗೆ ಬಡಿಸಲಾಗುತ್ತದೆ. ಸಾದಾದೋಸೆ, ಮಸಾಲೆದೋಸೆ, ರವೆದೋಸೆ, ರಾಗಿದೋಸೆ, ಗೋಧಿದೋಸೆ, ಇತ್ಯಾದಿ ನಾನಾ ವೈವಿಧ್ಯಗಳನ್ನು ಸೃಷ್ಟಿಸಲಾಗಿದೆ. "ದಾವಣಗೆರೆ ಬೆಣ್ಣೆದೋಸೆ" ಎಂಬುದು ಬಹಳ ಜನಪ್ರಿಯ.
 • ಊತಪ್ಪ - ಸ್ವಲ್ಪ ದಪ್ಪವಾದ ದೋಸೆ; ದೋಸೆಯ ಮೇಲೆ ಕತ್ತರಿಸಿದ ಟೊಮೇಟೋ, ಮೆಣಸಿನಕಾಯಿ, ಈರುಳ್ಳಿ ಮೊದಲಾದವುಗಳನ್ನು ಹರಡುತ್ತಾರೆ.
 • ಇಡ್ಲಿ - ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿ ರುಬ್ಬಿ ಮಾಡಿದ ಖಾದ್ಯ. ಇಡ್ಲಿಯೊಂದಿಗೆ ಉದ್ದಿನ ವಡೆ ಬಹಳ ಜನಪ್ರಿಯ. ಇವುಗಳನ್ನು ಕೊಬ್ಬರಿ ಚಟ್ಣಿಯೊಂದಿಗೆ ಸವಿಯುತ್ತಾರೆ. ತಮಿಳುನಾಡಿನ ಪ್ರಭಾವದಿಂದ ಸಾಂಬಾರ್ ಕೂಡಾ ಜನಪ್ರಿಯವಾಗಿದೆ.
 • ಕಡುಬು - ಜನಪ್ರಿಯವಾದ ಇಡ್ಲಿಯ ಸೋದರ ಎನ್ನಬಹುದಾದ ಈ ಖಾದ್ಯವನ್ನು ಹಲಸಿನ ಎಲೆಯ ಸುರುಳಿಯಲ್ಲಿಟ್ಟು ಬೇಯಿಸುತ್ತಾರೆ
 • ರಾಗಿರೊಟ್ಟಿ - ರಾಗಿಹಿಟ್ಟನ್ನು ಕುದಿಯುವ ನೀರಿನಲ್ಲಿ ಕಲಸಿ ಮಾಡುವ ರೊಟ್ಟಿ ಜನಪ್ರಿಯ ಖಾದ್ಯ.
 • ಅಕ್ಕಿರೊಟ್ಟಿ - ಅಕ್ಕಿಹಿಟ್ಟಿನಿಂದ ತಯಾರಿಸುವ ರೊಟ್ಟಿಯಲ್ಲಿ ನಾನಾ ವಿಧಗಳಿವೆ. ಅವರೇಕಾಯಿ, ಈರುಳ್ಳಿ, ಸಬ್ಬಸೀಗೆ ಸೊಪ್ಪು ಮೊದಲಾದವುಗಳನ್ನು ಹಿಟ್ಟಿಗೆ ಬೆರೆಸುವ ಮೂಲಕ ಅನೇಕ ವೈವಿಧ್ಯಗಳನ್ನು ಈ ರೊಟ್ಟಿಯಲ್ಲಿ ನೋಡಬಹುದು.
 • ಉಪ್ಪಿಟ್ಟು - ಗೋಧಿ ಅಥವಾ ಅಕ್ಕಿ ರವೆಯಿಂದ ಮಾಡಿದ ಖಾದ್ಯ. ಕೆಲವರು ಇದನ್ನು ಖಾರಾಭಾತ್ ಎನ್ನುತ್ತಾರೆ. ಇದರಲ್ಲೂ ಅನೇಕ ವೈವಿಧ್ಯಗಳಿವೆ. ಅವರೇಕಾಯಿ ಉಪ್ಪಿಟ್ಟು ಬಹಳ ವಿಶೇಷ.
 • ಅವಲಕ್ಕಿ - ಅವಲಕ್ಕಿಯನ್ನು ನೆನೆಸಿ ಒಗ್ಗರಣೆಗೆ ಹಾಕುತ್ತಾರೆ. ಗೊಜ್ಜವಲಕ್ಕಿ, ಮೊಸರವಲಕ್ಕಿ, ಸಿಹಿ ಅವಲಕ್ಕಿ ಎಂಬ ವೈವಿಧ್ಯಗಳೂ ಇವೆ.
 • ಶ್ಯಾವಿಗೆ - ಗೋಧಿ ಅಥವಾ ಅಕ್ಕಿಯ ಶ್ಯಾವಿಗೆಯನ್ನು ಹಬೆಯಲ್ಲಿ ಬೇಯಿಸಿ ಅದಕ್ಕೆ ಒಗ್ಗರಣೆ ಹಾಕಿ ಮಾಡಿದ ಖಾದ್ಯ. ಅನೇಕ ವೈವಿಧ್ಯಗಳಿವೆ.

ನವಣೆ/ಸಾಮೆ ಅಕ್ಕಿ/ರಾಗಿ ಮೊದಲಾದ ಧಾನ್ಯಗಳಿಂದಲೂ ದೋಸೆ, ಇಡ್ಲಿ, ರೊಟ್ಟಿ, ಉಪ್ಪಿಟ್ಟು ಮೊದಲಾದವುಗಳನ್ನು ತಯಾರಿಸುತ್ತಾರೆ. [೧]

ಸಂಜೆಯ ಉಪಾಹಾರ[ಬದಲಾಯಿಸಿ]

 • ಪಕೋಡಾ
 • ಆಲೂ ಬೋಂಡಾ
 • ಮಂಗಳೂರು ಬಜ್ಜಿ
 • ಮಂಗಳೂರು ಬನ್
 • ಮೈಸೂರು ಬಜ್ಜಿ
 • ಮದ್ದೂರು ವಡೆ
 • ಚುರಮುರಿ/ಕಡಲೆ ಪುರಿ/ ಮಂಡಕ್ಕಿ
 • ಖಾರದ ಅವಲಕ್ಕಿ
 • ಪತ್ರೆ ಅಥವಾ ಪತ್ರೊಡೆ - ಕೆಸುವಿನ ಎಲೆಯಿಂದ ತಯಾರಿಸಿದ ಖಾದ್ಯ

ಊಟ[ಬದಲಾಯಿಸಿ]

ವಿಶೇಷ ದಿವಸಗಳಲ್ಲಿ ಊಟವನ್ನು ಎಲೆಯ ಮೇಲೆ ಬಡಿಸುವುದು ಸಾಮಾನ್ಯ. ಬಾಳೆಯ ಎಲೆಯ ಮೇಲೆ ಬಡಿಸಿದ ಭೋಜನಕ್ಕೆ ವಿಶೇಷವಾದ ರುಚಿ. ಮುತ್ತುಗದ ಎಲೆಗಳನ್ನು ಕಡ್ಡಿಗಳಿಂದ ಹಚ್ಚಿ ಕೂಡಾ ಊಟದ ಎಲೆ ಮತ್ತು ದೊನ್ನೆಗಳನ್ನು ತಯಾರಿಸುತ್ತಾರೆ. ಎಲೆಯ ಮೇಲೆ ಒಂದು ವಿಶಿಷ್ಟ ಕ್ರಮದಲ್ಲಿ ಅಡಿಗೆಗಳನ್ನು ಬಡಿಸಲಾಗುತ್ತದೆ. ಉಪ್ಪು, ಒಂದೆರಡು ಬಗೆಯ ಕೋಸಂಬರಿ, ಗೊಜ್ಜು, ಒಂದೆರಡು ಬಗೆಯ ಪಲ್ಯಗಳು, ಉಪ್ಪೇರಿ/ಹಪ್ಪಳ/ಸಂಡಿಗೆ, ಪಾಯಸ, ತೊವ್ವೆ, ಚಿತ್ರಾನ್ನ ಮತ್ತು ಅನ್ನ ಬಡಿಸುವವರೆಗೆ ಪಂಕ್ತಿಯಲ್ಲಿ ಕುಳಿತವರು ಕಾಯುತ್ತಾರೆ. ಅನ್ನದ ಮೇಲೆ ತುಪ್ಪ ಬಡಿಸಲಾಗುತ್ತದೆ. ಇದಾದ ನಂತರ ಪಂಕ್ತಿ ಭೋಜನ ಪ್ರಾರಂಭವಾಗುತ್ತದೆ. ಮಜ್ಜಿಗೆ ಹುಳಿ ಅಥವಾ ತರಕಾರಿ ಕೂಟು ಇವುಗಳಲ್ಲಿ ಯಾವುದಾದರೂ ಒಂದನ್ನು ಬಡಿಸುತ್ತಾರೆ. ಕೆಲವೊಮ್ಮೆ ಬಿಸಿಬೇಳೆ ಹುಳಿಯನ್ನ ಮೊದಲಾದ ಖಾದ್ಯಗಳನ್ನು ಬಡಿಸುವುದೂ ರೂಢಿಯಲ್ಲಿದೆ. ಕೆಲವು ಕಡೆ ಈ ಸಂದರ್ಭದಲ್ಲಿ ಪುಲಾವ್ ಬಡಿಸುತ್ತಾರೆ; ಅದರೊಂದಿಗೆ ಮೊಸರುಬಜ್ಜಿಯ ಸಾಂಗತ್ಯ ಇರುತ್ತದೆ. ಸಂಡಿಗೆಹುಳಿ ಎಂಬ ವಿಶೇಷವನ್ನು ಕೆಲವು ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ - ಉದಾಹರಣೆಗೆ ಮದುವೆಯ ಹಿಂದಿನ ದಿನ ನಡೆಯುವ ದೇವರ ಸಮಾರಾಧನೆ ಅಥವಾ ದೇವರೂಟದ ದಿವಸ ಸಂಡಿಗೆಹುಳಿ ಮಾಡುವುದು ರೂಢಿ. ಇದಾದ ನಂತರ ಬಿಸಿ ಸಾರಿನ ಸರದಿ. ಪಂಕ್ತಿ ಭೋಜನದಲ್ಲಿ ಬಡಿಸಲು ತಡವಾದರೆ ಕುಳಿತವರು ಹಿಂದೆ ಬಡಿಸಿದ ಕೋಸಂಬರಿ ಇತ್ಯಾದಿ ಖಾದ್ಯಗಳನ್ನು ಮೆಲ್ಲುತ್ತಾ ಕಾಯುತ್ತಾರೆ. ಸಿಹಿಭಕ್ಷ್ಯ ಮತ್ತು ಖಾರದ ಭಕ್ಷ್ಯಗಳನ್ನು ಇದಾದ ನಂತರ ಬಡಿಸುತ್ತಾರೆ. ಸಿಹಿಭಕ್ಷ್ಯಗಳಲ್ಲಿ ಜನಪ್ರಿಯವಾದವು ಬೇಳೆಯ ಹೋಳಿಗೆ, ಕೊಬ್ಬರಿ ಹೋಳಿಗೆ, ಮಂಡಿಗೆ, ಲಾಡು, ಚಿರೋಟಿ, ಫೇಣಿ, ಮೊದಲಾದವು. ಖಾರದ ಭಕ್ಷ್ಯಗಳಲ್ಲಿ ಜನಪ್ರಿಯವಾದವು ಖಾರದ ಕಾಳು, ಆಂಬೊಡೆ, ಮೊದಲಾದವು. ಪಾಯಸ, ಚಿತ್ರಾನ್ನ ಇವುಗಳನ್ನು ಇದಾದ ನಂತರ ಬಡಿಸಲಾಗುತ್ತದೆ. ಊಟದ ಕೊನೆಗೆ ಅನ್ನ-ಮಜ್ಜಿಗೆಗಳನ್ನು ಬಡಿಸುತ್ತಾರೆ.

ಕೆಲವು ಕಡೆ ಈ ಊಟದ ಪದ್ಧತಿಯಲ್ಲಿ ಒಂದಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಉದಾಹರಣೆಗೆ ಕೆಲವು ಕಡೆ ಸಿಹಿಭಕ್ಷ್ಯವನ್ನು ಮೊದಲು ಬಡಿಸಲಾಗುತ್ತದೆ. ಎಲೆಯೂಟದ ಪಂಕ್ತಿಭೋಜನದಲ್ಲಿ ಜನ ಅಕ್ಕಪಕ್ಕದಲ್ಲಿ ಕುಳಿತು ಮಾತಾಡುತ್ತಾ ಊಟ ಮಾಡಲು ಅವಕಾಶವಿರುತ್ತದೆ. ಅತಿಥಿಗಳಿಗೆ ಉಪಚಾರ ಮಾಡಲು ಆತಿಥೇಯ ಖುದ್ದಾಗಿ ತುಪ್ಪ ಬಡಿಸುವ ಕ್ರಮ ರೂಢಿಯಲ್ಲಿದೆ. "ನಿಧಾನವಾಗಿ ಊಟ ಮಾಡಿ" ಎಂದು ಆತಿಥೇಯ ಅತಿಥಿಗಳಿಗೆ ಉಪಚರಿಸುವುದು ರೂಢಿ. ಊಟದ ನಡುವೆ ದೇವರನಾಮಗಳನ್ನು ಹಾಡುವ ಪದ್ಧತಿ ಕೂಡಾ ಅಲ್ಲಲ್ಲಿ ಇದೆ. ಊಟವಾದ ನಂತರ ತಾಂಬೂಲ ವನ್ನು ನೀಡಲಾಗುತ್ತದೆ.

ಸಂಜೆಯ ಆರತಕ್ಷತೆ ಕಾರ್ಯಕ್ರಮಗಳಲ್ಲಿ ಪಂಕ್ತಿಭೋಜನದ ಬದಲಾಗಿ ಐರೋಪ್ಯರಿಂದ ಪ್ರಭಾವಿತವಾದ ಬಫೇ ಮಾದರಿಯ ಊಟ ಜನಪ್ರಿಯವಾಗಿದೆ. ಇಲ್ಲಿ ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ಬದಲು ಅತಿಥಿ ತಾನೇ ತಟ್ಟೆಯನ್ನು ಕೈಯಲ್ಲಿ ಹಿಡಿದು ತನಗೆ ಬೇಕಾದ ಪದಾರ್ಥಗಳನ್ನು ಕೇಳಿ ಬಡಿಸಿಕೊಳ್ಳುವ ಕ್ರಮವಿರುತ್ತದೆ. ಬಡಿಸುವವರು ವಿವಿಧ ಭಕ್ಷ್ಯಗಳನ್ನು ಸಾಲಾಗಿ ಕೌಂಟರಿನಲ್ಲಿ ಇಟ್ಟುಕೊಂಡು ನಿಲ್ಲುತ್ತಾರೆ. ಉತ್ತರಭಾರತೀಯ ಮತ್ತು ದಕ್ಷಿಣಭಾರತೀಯ ಖಾದ್ಯಗಳು ಎರಡನ್ನೂ ಇಂಥ ಊಟದಲ್ಲಿ ಸವಿಯಬಹುದು. ಜನಪ್ರಿಯವಾದ ಖಾದ್ಯಗಳೆಂದರೆ ನಾನ್ ರೊಟ್ಟಿ ಮತ್ತು ಅದರೊಂದಿಗೆ ಕುರ್ಮಾ, ಮಸಾಲೆದೋಸೆ, ಅನ್ನ-ಸಾರು, ಒಂದೆರಡು ಸಿಹಿಭಕ್ಷ್ಯ, ಒಂದೆರಡು ಖಾರಭಕ್ಷ್ಯ ಹಾಗೂ ಮೊಸರನ್ನ. ಸಿಹಿಭಕ್ಷ್ಯಗಳಲ್ಲಿ ಫೇಡೆ, ಜಿಲೇಬಿ, ಗುಲಾಬ್ ಜಾಮೂನ್, ಐಸ್ ಕ್ರೀಂ ಮೊದಲಾದವು ಜನಪ್ರಿಯವಾಗಿವೆ. ಖಾರಭಕ್ಷ್ಯಗಳಲ್ಲಿ ಗೋಭಿ ಮಂಚೂರಿ ಎಂಬ ಚೈನಾ ಮೂಲದ ಖಾದ್ಯ, ಬೇಬಿ ಕಾರ್ನ್ ಮಂಚೂರಿ, ಪಕೋಡಾ, ಆಲೂ ಬೋಂಡಾ ಮೊದಲಾದವು ಜನಪ್ರಿಯವಾಗಿವೆ.

ಉತ್ತರ ಕರ್ನಾಟಕದ ಸಸ್ಯಾಹಾರಿ ಊಟ ವಿಶಿಷ್ಟ ಮೆನು ಹೀಗಿದೆ[ಬದಲಾಯಿಸಿ]

ಜೋಳದ ರೊಟ್ಟಿ - ತೆಳುವಾದ ರೊಟ್ಟಿಯನ್ನು ಸಾಮಾನ್ಯವಾಗಿ ಜೋಳದ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಸೀಧಾ ಬೆಂಕಿಯಾ ಮೇಲೆ ಅಥವಾ ಕಬ್ಬಿಣದ ಬಾಣಲೆ ಮೇಲೆ ಬೇಯಿಸಲಾಗುತ್ತದೆ. ಜೋಳ ಯಾ ಅಂತಹುದೇ ಧಾನ್ಯ ಮತ್ತು ಗೋಧಿ ಹಿಟ್ಟು ಕೂಡ ಪರ್ಯಾಯವಾಗಿ ಬಳಸಲಾಗುತ್ತದೆ.

ಎಣ್ಣೆ-ಗಯಿ / ತುಂಬು-ಗಯಿ - ಸಣ್ಣ ಬದನೆಕಾಯನ್ನು ನೆಲದ ಕಡಲೆಕಾಯಿ, ನೆಲದ ಎಳ್ಳು, ಶುಂಠಿ, ಬೆಳ್ಳುಳ್ಳಿ, ಗರಂ ಮಸಾಲಾ, ಉಪ್ಪು, ಮತ್ತು ನಂತರ ಸಾಟಿ ಈರುಳ್ಳಿ ಮತ್ತು ಇತರ ಮಸಾಲೆಗಳೊಂದಿಗೆ ಸೇರಿದಂತೆ ತುಂಬಿಸಿ. ಬದನೆಕಾಯಿ ಬದಲಿಗೆ ಯಾವುದೇ ಇತರ ಸೂಕ್ತ ತರಕಾರಿ ಬಳಸಬಹುದು.ಜನಪ್ರಿಯ ಸಿಹಿತಿನಿಸುಗಳು ಶೇಂಗ ಉಂಡೆಗೊಡಿ ಹುಗ್ಗಿ

ಶೇಂಗಾ / ಸೇಸಮೆ ಚಟ್ನಿ - ವಿವಿಧ ನೆಲದ ಕಡಲೆಕಾಯಿ ಅಥವಾ ಎಳ್ಳಿನ ತಯಾರಿಸಲಾಗುವ ಪುಡಿ / ಡ್ರೈ ಚಟ್ನಿ.

ಕೆಂಪು ಕಾರ ಅಥವಾ ರಂಜಕ - ಒಂದು ವ್ಯಂಜನ ಪದಾರ್ಥದಂತೆ ಸೇವಿಸುವ ಚಟ್ನಿ ಪೇಸ್ಟ್ ಕೆಂಪು ಮೆಣಸಿನಕಾಯಿಗಳಳೊಂದಿಗ ಮಾಡಲಾಗುತ್ತದೆ.

ದಕ್ಷಿಣ ಕರ್ನಾಟಕ ವ್ಯಂಜನಗಳು[ಬದಲಾಯಿಸಿ]

ದಕ್ಷಿಣ ಕರ್ನಾಟಕ ಅಥವಾ ಹಳೆಯ ಮೈಸೂರು ಪ್ರದೇಶದ ಬಯಲುಸೀಮೆ ಅಥವಾ ಇಂದಿನ ಕೋಲಾರ, ಬೆಂಗಳೂರು, ಮೈಸೂರ್ , ತುಮಕೂರು , ಮಂಡ್ಯ, ಹಾಸನ, ಚಾಮರಾಜನಗರ ಸೇರಿದಂತೆ ಬಯಲು ಎಂದು ಕರೆಯಲಾಗುತ್ತದೆ. ರಾಗಿ ಮತ್ತು ಅಕ್ಕಿ ಅತಿ ಮುಖ್ಯವಾದ ಪ್ರಧಾನ ಧಾನ್ಯಗಳು, ಜೋಳ ಮತ್ತು ಜೋಳ ಯಾ ಅಂತಹುದೇ ಧಾನ್ಯ ಸಹ ಪ್ರದೇಶದ ಒಣ ಭಾಗಗಳಲ್ಲಿ ಬೆಳೆದು ಸೇವಿಸಲಾಗುತ್ತದೆ . ದಿನದ ಮೊದಲ ಊಟ ಸಾಕಷ್ಟು ಗಣನೀಯ ಉಪಹಾರ ಹೊಂದಿದೆ. ನಿಯಮಿತವಾಗಿ ಊಟ ರಾಗಿ ಮುದ್ದೆ ಅಥವಾ ರಾಗಿ ಹಿಟ್ಟು, ಕಣಕದ ಖ್ಯಾದ ಸಾಮಾನ್ಯವಾಗಿ ಇವು ಸೇರಿವೆ: ಸಾರು, ಅನ್ನ ಮತ್ತು ಮೊಸರು ಒಂದು ಮೇಲೋಗರ ತಯಾರಿಸಲಾಗುತ್ತದೆ. ಐಚ್ಛಿಕವಾಗಿ ಜೊತೆಯಲ್ಲಿರುವ ಕೋಸಂಬರಿ ಎಂಬ ಸಲಾಡ್, ವಿವಿಧ ಪಲ್ಯಗಳು ಸೇರಿವೆ (ಹುರಿದ, ಬೇಯಿಸಿದ ಅಥವಾ ಸಾಟಿ ಮಸಾಲೆ ಹಾಕಿದ ತರಕಾರಿಗಳು) ಮತ್ತು ವರ್ಗೀಕರಿಸಿದ ಉಪ್ಪಿನಕಾಯಿ.

ಬಾಳೆಯ ಎಲೆಯ ಮೇಲೆ ಬಡಿಸಿದ ಭೋಜನ


ಉಲ್ಲೇಖಗಳು[ಬದಲಾಯಿಸಿ]

 1. "South Indian Inscriptions, Vol III, Bombay Karnataka Inscriptions, Geographical Divisions". Retrieved 10 October 2007. 

External links[ಬದಲಾಯಿಸಿ]